ಕವನ ವಾಚನ - Kannada Kavana Vaachana

ನಿಮ್ಮೊಡನಿದ್ದೂ ನಿಮ್ಮಂತಾಗದೆ - ಕವನ ವಾಚನ


Published: 19 November 2020 at 11:00 UTC

Listen on

Episode notes

ನಿಮ್ಮೊಡನಿದ್ದೂ ನಿಮ್ಮಂತಾಗದೆ

ಜಗ್ಗಿದ ಕಡೆ ಬಾಗದೆ

ನಾನು ನಾನೇ ಆಗಿ. ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ

ಪರಕೀಯನಾಗಿ

ತಲೆಯೆತ್ತುವುದಿದೆ ನೋಡಿ

ಅದು ಬಲುಕಷ್ಟದ ಕೆಲಸ.

 

ವೃತ್ತದಲ್ಲಿ ಉನ್ಮತ್ತರಾದ

ನಿಮ್ಮ ಕುಡಿತ ಕುಣಿತ ಕೂಟಗಳು

ಕೆಣಕಿ ಎಸೆದಿದ್ದರೂ

ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ

ಸಂಯಮವನ್ನೇ ಪೋಷಿಸಿ ಸಾಕುತ್ತ

ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ

ಅದು ಬಲು ಕಷ್ಟದ ಕೆಲಸ.

 

ಒಳಗೊಳಗೆ ಬೇರುಕೊಯ್ದು

ಲೋಕದೆದುರಲ್ಲಿ ನೀರು ಹೊಯ್ದು

ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ

ಗೊತ್ತಿಲ್ಲದಂತೆ ನಟಿಸಿ

ಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ ಹರಟಿ

ಬಾಳ ತಳ್ಳುವುದಿದೆ ನೋಡಿ

ಅದು ಬಲು ಕಷ್ಟದ ಕೆಲಸ.

 

ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು

ಸಂಶಯದ ಪಂಜವೆತ್ತಿ

ನನ್ನ ನಂಬಿಕೆ ನೀಯತ್ತು ಹಕ್ಕು

ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ

ನೋವಿಗೆ ಕಣ್ಣು ತುಂಬಿದ್ದರೂ,

ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ

ನನ್ನದುರಿನಲ್ಲೇ ತನಿಖೆಮಾಡುವ ಕ್ಷಣವನ್ನು

ಹುಸಿನಗುತ್ತ ಎದುರಿಸುವುದಿದೆಯಲ್ಲ

ಅದು ಬಲು ಕಷ್ಟದ ಕೆಲಸ.

 

-ಕೆ ಎಸ್ ನಿಸಾರ್ ಅಹಮದ್.

ಕವನ ಸಂಕಲನ: ಸಂಜೆ ಐದರ ಮಳೆ.


https://sites.google.com/site/kavanasangraha/Home/nisaar-ahamad/samje-aidara-male

https://ruthumana.com/2020/05/04/poetry-reading-k-s-nisar-ahamed/

https://www.youtube.com/watch?v=XfOZy918lCk